ಕೊರೊನಾ ವೈರಸ್‌ನಿಂದ ಬರುವ ಕೋವಿಡ್ 19 ಭೀತಿ ಜನರನ್ನು ಕಾಡುತ್ತಿದೆ. ಇದರ ಬಗ್ಗೆ ಆತಂಕ ಬೇಡ, ಎಚ್ಚರವಿರಲಿ ಎಂದು ಪ್ರತಿಯೊಂದು ದೇಶವೂ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ. ಕೊರೊನಾ ವೈರಸ್ ಎಂದರೇನು? ಇದನ್ನು ತಡೆಗಟ್ಟುವುದು ಹೇಗೆ ಎಂಬ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಕೂಡ ನೀಡಿದೆ. ಕೊರೊನಾವೈರಸ್ ಎಂಬ ವೈರಸ್ ಪ್ರಾಣಿಗಳಲ್ಲಿ ಕಂಡು ಬರುತ್ತದೆ. ಕೊರೊನಾವೈರಸ್‌ನಲ್ಲಿ ಹಲವು ಬಗೆಗಳಿವೆ. ಎಲ್ಲಾ ವೈರಸ್ ಹಾನಿಕಾರಕವಲ್ಲ. ಆದರೆ ಈಗ ಕಾಣಿಸಿಕೊಂಡಿರುವ ನೋವೆಲ್ ಕೊರೊನಾ ವೈರಸ್ ತುಂಬಾ ಅಪಾಯಕಾರಿಯಾದ ವೈರಸ್ ಆಗಿದ್ದು ಇದು ಸೋಂಕು ತಗುಲಿದ ವ್ಯಕ್ತಿಯಿಂದ ಆರೋಗ್ಯವಂತ ವ್ಯಕ್ತಿಗೆ ಉಸಿರಾಟ, ಸ್ಪರ್ಶ, ಅವರು ಮುಟ್ಟಿದ ವಸ್ತುಗಳನ್ನು ಮುಟ್ಟುವುದರಿಂದ ಹರಡುವುದು. ಕೊರೊನಾ ವೈರಸ್ ಲಕ್ಷಣವೆಂದರೆ ಶೀತ, ಜ್ವರ, ತಲೆ ನೋವು, ತೀವ್ರ ಉಸಿರಾಟದ ತೊಂದರೆ. ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಹಲವಾರು ಪ್ರಶ್ನೆಗಳಿವೆ, ಇಲ್ಲಿ ನಾವು ಕೋವಿಡ್ 19 ಬಗ್ಗೆ ಜನರಲ್ಲಿ ಮೂಡುವ ಪ್ರಶ್ನೆಗಳಿಗೆ ಹೆಚ್ಚಿನ ಮಾಹಿತಿ ನೀಡಿದ್ದೇವೆ ನೋಡಿ.